ವಿದ್ಯಾರ್ಥಿ ಸಂಘದ ಉದ್ಘಾಟನೆ 2016-17
ಶಿಕಾರಿಪುರ: ಪೋಷಕರು, ಶಿಕ್ಷಕರ ಗೌರವ ಹೆಚ್ಚುವಂತೆ ವಿದ್ಯಾರ್ಥಿಗಳು ನಡೆದುಕೊಳ್ಳಬೇಕು ಎಂದು ಶಾಸಕ ಬಿ.ವೈ. ರಾಘವೇಂದ್ರ ಹೇಳಿದರು.
ಕುಮದ್ವತಿ ವಿಜ್ಞಾನ ಹಾಗೂ ವಾಣಿಜ್ಯ ಪದವಿ ಪೂರ್ವ ಹಾಗೂ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿ ಸಂಘದ ಉದ್ಘಾಟನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಆತ್ಮ ವಿಶ್ವಾಸ ಬೆಳೆಸಿಕೊಳ್ಳುವುದಕ್ಕೆ ಪ್ರತಿಯೊಬ್ಬ ವಿದ್ಯಾರ್ಥಿ ಗಮನ ನೀಡಬೇಕು ಆಗ ಉತ್ತಮ ಅಂಕ ಪಡೆಯುವುದಕ್ಕೆ, ಒಳ್ಳೆಯ ಜೀವನ ರೂಪಿಸಿಕೊಳ್ಳುವುದಕ್ಕೆ ಸಹಕಾರಿ ಆಗುತ್ತದೆ ಎಂದರು.
ಜಾಗತೀಕರಣದ ಈ ದಿನಗಳಲ್ಲಿ ದೇಶದ ಎಲ್ಲೆಗಳು ಕಾಣೆಯಾಗಿದ್ದು ಉದ್ಯೋಗ ಅವಕಾಶಗಳೂ ಹೆಚ್ಚಿವೆ ಉತ್ತಮ ಕೌಶಲ್ಯ, ಪರಿಶ್ರಮ ಗುಣ ಹೊಂದಿದವರಿಗೆ ಕೆಲಸ ಪಡೆಯುವುದು ಇಂದು ಕಷ್ಟವಲ್ಲ ಪ್ರತಿಯೊಬ್ಬ ವಿದ್ಯಾರ್ಥಿ ತಮ್ಮ ಶೈಕ್ಷಣಿಕ ಅವಧಿಯಲ್ಲಿ ಎಲ್ಲಿಯೂ ಮೈಮರೆಯದೆ ಶಿಕ್ಷಣದ ಸಾರವನ್ನು ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರೋ. ಮಂಜುನಾಥ ಮಾತನಾಡಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮುದ್ರಾ ಯೋಜನೆ ಯುವಕರಿಗೆ ಸಹಾಯವಾಗಿದ್ದು, ಈ ಯೋಜನೆಯಡಿಯಲ್ಲಿ 5 ಲಕ್ಷದ ತನಕ ಯಾವುದೇ ಠೇವಣಿ ಇಲ್ಲದೆ ಸಾಲ ಪಡೆಯಬಹುದು ಅದು ಸ್ವಯಂ ಉದ್ಯೋಗ ನಡೆಸಲು ಸಹಾಯಕವಾಗಿದೆ ಇದನ್ನು ಯುವಕರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.
ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿ ಕುಮಾರಿ ಶೀತಲ್, ಅಕ್ಷತಾ ಕಾರಂತ್, ವೀಣಾ ಡಿವಿಜಾರನ್ನು ಸನ್ಮಾನಿಸಲಾಯಿತು. ಸಂಸ್ಥೆ ಆಡಳಿತಾಧಿಕಾರಿ ಲಿಂಗರಾಜ, ಕೆ. ಕುಬೇರಪ್ಪ, ಪ್ರಾಚಾರ್ಯ ಡಾ. ಎಂ.ವೀರೇಂದ್ರ ಡಾ. ವಿನಾಯಕ ಮತ್ತು ಉಪಸ್ಥಿತರಿದ್ದರು. ಮಂಜುನಾಥ ಬಣಕಾರ್ ಸ್ವಾಗತಿಸಿ, ಮಂಜುನಾಥ ವಂದಿಸಿ, ಕುಮಾರಿ ಸ್ನೇಹ ನಿರೂಪಿಸಿದರು.