ಪೌರತ್ವ ತರಬೇತಿ ಶಿಬಿರ ಉದ್ಘಾಟನೆ ಕಾರ್ಯಕ್ರಮ
ದಿನಾಂಕ 28-11-2017ರ ಮಂಗಳವಾರದಂದು ಬೆಳಗ್ಗೆ 11.00 ಗಂಟೆಗೆ ಮೈತ್ರಿ ಶಿಕ್ಷಣ ಮಹಾವಿದ್ಯಾಲಯದ ವತಿಯಿಂದ ಶ್ರೀರಾಂಪುರದಲ್ಲಿ ಹಮ್ಮಿಕೊಳ್ಳಲಾದ 3 ದಿನಗಳ ಕಾಲದ ಪೌರತ್ವ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮೈತ್ರಿ ಶಿಕ್ಷಣ ಮಹಾವಿದ್ಯಾಲಯದ ಸಹ ಕಾರ್ಯದರ್ಶಿಗಳು, ಜನಶಿಕ್ಷಣ ಸಂಸ್ಥಾನದ ನಿರ್ದೇಶಕರು ಆದಂತಹ ಶ್ರೀಮತಿ ಅರುಣಾದೇವಿ ಎಸ್ ವೈ ರವರು ಮಾತನಾಡಿದರು.
ಶ್ರೀಮತಿಯವರು ಮುಂದುವರೆಯುತ್ತಾ, ಬದುಕಿನಲ್ಲಿ ಎರೆಡೆರಡು ಗುರಿಗಳು ಮುಖ್ಯ, ಪ್ರತಿಯೊಬ್ಬನು ಪರ್ಯಾಯ ಗುರಿಗಳನ್ನು ಹೊಂದುವುದರಿಂದ ಜೀವನದಲ್ಲಿ ಮುನ್ನಡೆಯಲು, ನಿರಾಶೆಗೊಳ್ಳದಿರಲು ಅನುಕೂಲ ಎಂದರು. ಯೋಗ ನಮ್ಮ ಬದುಕಿನ ಒಂದು ಭಾಗವಾಗಬೇಕು, ನಂಬಿಕೆ ನಮ್ಮ ಆತ್ಮವಿಶ್ವಾಸದ ಮೂಲವಾಗಬೇಕು ಹಾಗೂ ಇಂತಹ ಶಿಬಿರಗಳು ಪ್ರಶಿಕ್ಷಣಾರ್ಥಿಗಳನ್ನು ಸ್ವ-ತೊಡಗಿಕೊಳ್ಳುವಿಕೆಗೆ ಪ್ರೇರೇಪಿಸಿ ಪ್ರತಿ ಅನುಭವಗಳು ಶಿಕ್ಷಣವನ್ನೀಯುವಂತಾಗಬೇಕು ಎಂದರು.
ತಮ್ಮ ಉದ್ಘಾಟನಾ ನುಡಿಗಳಲ್ಲಿ ಈ ವಿಷಯಗಳನ್ನಷ್ಟೇ ಅಲ್ಲದೆ ಇಂದಿನ ದಿನಗಳಲ್ಲಿನ ಇಂಗ್ಲೀಷ್ ಭಾಷೆಯ ಪ್ರಾಮುಖ್ಯತೆ, ಯೋಗದಿಂದಾಗುವ ಅನುಕೂಲಗಳು, ಪರಿಸರ ರಕ್ಷಣೆ, ಆಹಾರ ಪದ್ಧತಿ ಹಾಗೂ ದೇಶದ ಪ್ರತಿಯೊಬ್ಬ ನಾಗರೀಕನ ಗುರುತರ ಜವಾಬ್ಧಾರಿಗಳನ್ನು ಕುರಿತು ವಿಸ್ತೃತವಾಗಿ ಮಾತನಾಡಿದರು. ಕೊನೆಗೆ ಈ ನಿಟ್ಟಿನಲ್ಲಿ ತರಬೇತಿ ನೀಡಲು ಆಯೋಜಿಸಲಾದ ಶಿಬಿರ ಯಶಸ್ವಿಯಾಗಲಿ ಎಂದು ಹಾರೈಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಪಿಇಎಸ್ ಐಎಎಮ್‌ಎಸ್ ನ ಸಹ ಪ್ರಾಧ್ಯಾಪಕಿಯಾದ ಶ್ರೀಮತಿ ಶಾರದಾ ಜಿ ರವರು ತಮ್ಮ ಅತಿಥಿ ಭಾಷಣದಲ್ಲಿ ಪ್ರಸ್ತುತ ದಿನಗಳಲ್ಲಿ ಇಂಗ್ಲೀಷ್ ಭಾಷೆಯ ಪ್ರಾಮುಖ್ಯತೆ ಮತ್ತು ಅನುವಾರ್ಯತೆ ಜೊತೆಗೆ ಇಂಗ್ಲೀಷ್ ಭಾಷೆಯ ಮೇಲೆ ಪ್ರಭುತ್ವ ಸಾಧಿಸಲು ಕೈಗೊಳ್ಳಬಹುದಾದ ಕ್ರಮಗಳನ್ನು ಕುರಿತು ಉದಾಹರಣೆ ಸಹಿತ ಸವಿವರವಾಗಿ ಮಾರ್ಗದರ್ಶನ ನೀಡಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಆಡಳಿತಾಧಿಕಾರಿಗಳಾದ ಶ್ರೀ. ನಿಶಿತ್ ಕೆ ಹೆಚ್, ಪ್ರಾಚಾರ್ಯೆ ಡಾ.ಶಾಲಿನಿ ಜೆ ರವರು ಹಾಗೂ ಬೋಧಕ-ಬೋಧಕೇತರ ವರ್ಗದವರೆಲ್ಲರೂ ಹಾಜರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಪ್ರಶಿಕ್ಷಣಾರ್ಥಿ ಶ್ರೀಮತಿ ಸೌಮ್ಯ ಹೆಚ್ ಎನ್ ರವರ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮಕ್ಕೆ ಪ್ರಾಚಾರ್ಯೆ ಡಾ.ಶಾಲಿನಿ ಜೆ ರವರು ಸ್ವಾಗತಿಸಿದರೆ, ಉಪನ್ಯಾಸಕ ಶ್ರೀ ಯೋಗೀಶ್ ಎಸ್ ರವರು ವಂದಿಸಿದರು. ಪ್ರಶಿಕ್ಷಣಾರ್ಥಿ ಸೌಮ್ಯ ಜೆ.ವಿ ನಿರೂಪಿಸಿದರು.